ವಿಷಯಕ್ಕೆ ಹೋಗಿ

ಮಮತೆಯ ಮಡಿಲು: ಕವಿ ಸಾಹಿತಿಗಳ ಜೀವಾಳ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕಥೆ

ದಟ್ಟವಾದ ಕಾಡೊಂದರಲ್ಲಿ ಹುಲಿ, ಸಿಂಹ, ಚಿರತೆ, ಆನೆ, ಕೋತಿ, ಕರಡಿ ಹೀಗೆ ಹಲವಾರು ಪ್ರಾಣಿಗಳು ನೆಮ್ಮದಿಯಿಂದ ವಾಸವಾಗಿದ್ದವು. ಅಲ್ಲಿಯೇ ಸಮೀಪದಲ್ಲಿ ಒಂದು ನದಿ ಹರಿಯುತ್ತಿತ್ತು. ಆ ಕಾಡಿನ ಎಲ್ಲಾ ಪ್ರಾಣಿಗಳು ಆ ನದಿಯ ನೀರನ್ನು ಕುಡಿದು ತಮ್ಮ ಬಾಯಾರಿಕೆಯನ್ನು ನೀಗಿಸಿಕೊಳ್ಳುತ್ತಿದ್ದವು.

    ಒಮ್ಮೆ ಪಕ್ಕದ ಕಾಡಿನ ಜಿಂಕೆಯ ಮರಿಯೊಂದು ಹೇಗೋ ತನ್ನ ಹಿಂಡನ್ನು ತಪ್ಪಿಸಿಕೊಂಡು ಈ ಕಾಡಿಗೆ ಬಂದು ಸೇರಿತು. ಪಾಪ ! ಆ ಮರಿಗೆ ಕೇವಲ ನಾಲ್ಕೈದು ತಿಂಗಳುಗಳು ಮಾತ್ರವೇ ಮಾಸಿದ್ದವು. ಒಮ್ಮೆಲೇ ತನ್ನ ತಾಯಿಯನ್ನು, ಬಳಗವನ್ನು ತಪ್ಪಿಸಿಕೊಂಡ ಮರಿಗೆ ಏನು ಮಾಡಬೇಕೆಂದು ತೋಚದೇ ಕಣ್ಣೀರು ಸುರಿಸುತ್ತಾ ಅಳುತ್ತಾ ಇತ್ತು.

     ದುರದೃಷ್ಟವೋ ಎಂಬಂತೆ ಒಂದು ಹೆಣ್ಣು ಹುಲಿಯೊಂದು ಆಜಿಂಕೆಯನ್ನು ಅಟ್ಟಿಸಿಕೊಂಡು ಹೋಗುತ್ತಿತ್ತು. ಜಿಂಕೆಯ ಮರಿ ಅರಚುತ್ತಾ, ಚೀರುತ್ತಾ ಪ್ರಾಣ ರಕ್ಷಿಸಿಕೊಳ್ಳಲು ಒದ್ದಾಡುತ್ತಿತ್ತು.

     ನದಿಯ ಇನ್ನೊಂದು ಬದಿಯಲ್ಲಿರುವ ತಾಯಿ ಜಿಂಕೆಗೆ ತನ್ನ ಮರಿ ಆರಚುತ್ತಿರುವಂತೆ ಭಾಸವಾಯಿತು. ತಕ್ಷಣ ತಾಯಿ ಜಿಂಕೆ ಚೀರುವುದನ್ನು ಆಲಿಸುತ್ತಾ ಹಳ್ಳದ ದಡದ ಬಳಿ ನಿಂತಿತ್ತು."ಕಣ್ಣರಿಯದ್ದು ಕರುಳರಿಯುತ್ತದೆ. ಎಂಬಂತೆ ತಾಯಿ ಜಿಂಕೆ ಹೇಗೋ ಮಾಡಿ ಹಳ್ಳವನ್ನು ದಾಟಿ ಮರಿ ಅರಚುವ ಶಬ್ಧ ಕೇಳಿಸುವ ಕಡೆ ಬಂದಿತ್ತು.

    ಅಲ್ಲಿ ಬಂದು ನೋಡಿ, ತಾಯಿ ಜಿಂಕೆ ಒಮ್ಮೆಲೇ ಕಂಗಾಲಾಯಿತು. ಆಯ್ಯೋ! ಹುಲಿಯೊಂದು ಅಟ್ಟಿಸಿಕೊಂಡು ಹೋಗುತ್ತಿರುವುದು ತನ್ನ ಮರಿಯೇ ಎಂದು ತಿಳಿದು ಜಿಂಕೆಯು ಏನು ಮಾಡಲು ತೋಚದೇ ಹುಲಿಯ ಬಳಿ ಹೋಗಿ ಬೇಡಿತು.


     ಹುಲಿರಾಯ ನಿನಗೆ ಆಹಾರಬೇಕೆಂದರೆ ನನ್ನನ್ನೇ ಕೊಂದು ತಿಂದು ಬಿಡು ಆದರೆ ನನ್ನ ಮರಿಯನ್ನು ಮಾತ್ರ ನನ್ನ ಬಳಗದ ಬಳಿ ಬಿಟ್ಟುಬಿಡು ಎಂದಿತು. ಹುಲಿ ಒಂದು ನಿಮಿಷ ನಿಂತು ನೋಡುವಷ್ಟರಲ್ಲಿ ಜಿಂಕೆಯ ಮರಿ ತನ್ನ ತಾಯಿಯ ಮೊಲೆ ಹಾಲು ಕುಡಿಯಲು ಪ್ರಾರಂಭಿಸಿತ್ತು.

        ವಿಧಿಯಾಟ ಎಂಬಂತೆ ಕೆಲ ದಿನಗಳ ಹಿಂದಷ್ಟೇ ಹುಲಿಯ ಮರಿಯನ್ನು ಸಿಂಹವೊಂದು ಕೊಂದುಹಾಕಿತ್ತು. ತಾನು ಜಿಂಕೆಯ ಮರಿಯನ್ನು ಕೊಂದು ತಿನ್ನಲು ಬಯಸುತ್ತಿದ್ದೇನೆ ಹುಲಿಗೆ ಆ ಸನ್ನಿವೇಶ ಇನ್ನೂ ನೆನಪಾಗುವಷ್ಟರಲ್ಲಿಯೇ ಜಿಂಕೆಯ ಮರಿಯು ತಾಯಿಯ ಮಡಿಲನ್ನು ಸೇರಿ ಸಂಭ್ರಮಿಸುತ್ತಿರುವುದು ತನ್ನ ಎದುರಿಗೆ ಕಂಡಿತು.

       ಹುಲಿಯು ಜಿಂಕೆಯನ್ನಾಗಲೀ, ಅದರ ಮರಿಯನ್ನಾಗಲೀ ತಿನ್ನುವ ಬದಲು ತನ್ನಷ್ಟಕ್ಕೆ ತಾನು ಕಣ್ಣೀರು ಸುರಿಸುತ್ತಾ, ಕಾಡಿನ ದಾರಿಯ ಕಡೆ ತನ್ನ ಮರಿಯನ್ನು ನೆನಪು ಮಾಡುತ್ತಾ ನಡೆಯಿತು. ಇತ್ತ ಜಿಂಕೆ ಅತೀ ಸಂಭ್ರಮದಿಂದ ತನ್ನ ಮರಿಯೊಂದಿಗೆ ಹಳ್ಳವನ್ನು ಪ್ರಯಾಸಪಟ್ಟು ದಾಟಿ ತನ್ನ ಹಿಂಡನ್ನು ಸೇರಿತು.

ಮಮತೆಯ ಮಡಿಲು ಎಂದರೆ ಇದೇ ಅಲ್ಲವೆ? ತಾಯಿಯ ಪ್ರೀತಿ ತಾಯಿಗೆ ಮಾತ್ರ ಗೊತ್ತಲ್ಲವೇ?


    ಲೇಖಕರು :







ಪ್ರೇಮಾವತಿ ಕೃಷ್ಣ ಭಟ್ಟ

ಶಿಕ್ಷಕಿಯರು ಮತ್ತು ಹವ್ಯಾಸಿ ಬರಹಗಾರ್ತಿ

ಸ ಹಿ ಪ್ರಾ ಶಾಲೆ ಕಾನಗೋಡ

ಕಾಮೆಂಟ್‌ಗಳು

Follow us