ನಿಂತಲ್ಲೇ ಬೇರು ಬಿಟ್ಟು
ಬೆಳೆದುದೆಲ್ಲ ನಮಗೆ ಕೊಟ್ಟು
ಬಿದ್ದರೂ ಎಷ್ಟೊಂದು ಪೆಟ್ಟು
ತೋರಲಾರೆ ಮುನಿಸು ಸಿಟ್ಟು
ಹೇಳೆ ನಿನ್ನ ಬದುಕ ಗುಟ್ಟು.....!
ಹೂ ಹಣ್ಣು ಹಸಿರು ತಳಿರು
ಹಾಸಿ ಹರವಿ ನೆರಳ ನವುರು
ಕಡಿದರೂನು ಮತ್ತೆ ಚಿಗುರು
ತೋರಲಾರೆ ಯಾವ ಕಸರು
ಸಹನೆ ತಾನೇ ನಿನ್ನ ಉಸಿರು...!
ಮಣ್ಣನುಂಡು ಹಣ್ಣನಿತ್ತು
ಪೊರೆವೆ ಜೀವ ಜಗತ್ತು
ಬಂದರೆ ನಮಗೆ ಆಪತ್ತು
ರೋಗ ಗುಣ ನಿನ್ನ ಸ್ವತ್ತು
ಕಾಪಾಡುವೆ ನಿನ್ನನ್ನಿತ್ತು...!
ಭೇದ ಭಾವ ನಿನ್ನೊಳಿಲ್ಲ
ಎರಡು ಬಗೆವ ನೀತಿಯಿಲ್ಲ
ನಿನ್ನ ಮುಂದೆ ಒಂದೇ ಎಲ್ಲ
ಕೊಟ್ಟು ಬಿಡುವೆ ನಿನ್ನದೆಲ್ಲ
ನಿನ್ನ ಹಾಗೆ ನಾವೇಕೆ ಇಲ್ಲ..!
ಮಡಿಯೆ ಮಣ್ಣಿಗೆ ಮರಳುವೆ
ಕಸುವ ಮರಳಿ ನೀಡುವೆ
ನನ್ನಂತೆ ಬಾಳು ಮಗುವೆ
ಮೌನದಿ ನೀ ತಿಳಿಸುವೆ
ಮತ್ತೆ ಮತ್ತೆ ಸೆಳೆಯುವೆ...!

ರೇಖಾ ಭಟ್
ಶಿಕ್ಷಕರು
ಸ ಹಿ ಪ್ರಾ ಶಾಲೆ ಕಾನಗೋಡ, ಯಲ್ಲಾಪುರ, ಶಿರಸಿ ಶೈ ಜಿಲ್ಲೆ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ