ವಿಷಯಕ್ಕೆ ಹೋಗಿ

ಶಾಲೆಯ ಆ ದಿನಗಳು

ಕಳೆದು ಹೋದ ಕ್ಷಣಗಳು - ಸುಂದರ ಸವಿನೆನಪಿನೊಂದಿಗೆ 

     ಇಂದು ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ನಾವು ಶಾಲೆಯ ಒಳ ಹೊಕ್ಕರೆ ಒಂದು ಕ್ಷಣವಾದರೂ  ನಾವು ಮಕ್ಕಳಾಗಿ ಇರಬೇಕಾಗಿತ್ತು,

ಆ ದಿನಗಳು ಅದೆಷ್ಟು ಸುಂದರ ಎಂದು ಅನಿಸದೇ ಇರದು. ಹೌದು ಬಾಲ್ಯವೇ ಹಾಗೆ ಎಂದೆಂದಿಗೂ ಹಸಿರು, ಅದರಲ್ಲೂ ಹಳ್ಳಿ ಪರಿಸರದಲ್ಲಿ ಹುಟ್ಟಿ ಬೆಳೆದ ನಾವು ಸಾಕಷ್ಟು ಸವಿಯಾದ ಅನುಭವಗಳನ್ನು ನಮ್ಮೊಳಗೆ ಇಟ್ಟುಕೊಂಡಿದ್ದೇವೆ. ಶಾಲೆಯ ದಿನಗಳಂತೂ ಮರೆಯಲಾಗದು. ಇಂದಿಗೂ ತುಂಬು ಅಭಿಮಾನದಿಂದ ತೋರಿಸುವ ಸ್ಥಳ ಇದ್ದರೆ ಅದು ನನ್ನ ಶಾಲೆ

    ಆಗೆಲ್ಲಾ ಮಳೆಗಾಲಕ್ಕೆ ಸರಿಯಾಗಿ ಶಾಲೆ ಪ್ರಾರಂಭವಾಗುತ್ತಿತ್ತು. ಮಳೆ ಎನ್ನುವುದೇ ಖುಷಿ ಅದರಲ್ಲೂ ಹೊಸ ಬ್ಯಾಗು ಹೊಸ ಕೊಡೆ ಹೊಸ ಚಪ್ಪಲಿ ಶಾಲೆ ಎಂದರೆ ಸಂಭ್ರಮ. ಗೆಳೆಯರೊಂದಿಗೆ ಕೂಡಿ ಸುದ್ದಿ ಹೇಳಿದಷ್ಟು ಸಾಲದು. ರಜೆಯ ಅನುಭವಗಳನ್ನು ವರ್ಣಿಸಿದಷ್ಟು ಮುಗಿಯದು ಶಾಲೆಯ ಎಲ್ಲಾ ಕೆಲಸಗಳಲ್ಲೂ ಉತ್ಸುಕರಾಗಿರುತ್ತಿದ್ದೆವು. ನಮ್ಮ ಶಿಕ್ಷಕರು ಸಹ ನಮ್ಮೊಳಗೆ ಜೀವನೋತ್ಸಾಹವನ್ನು ತುಂಬುತ್ತಿದ್ದರು. ಶಿಕ್ಷಕರೊಂದಿಗಿನ ಹಾಡು, ಹರಟೆ, ಆಟ ಪಾಠ ಕುಣಿತ ಎಲ್ಲವೂ ಇಂದಿಗೂ ಎಂದಿಗೂ ಜೀವಂತ.

    ಬಿಡುವು ಸಿಕ್ಕಾಗಲೆಲ್ಲ ಬರೀ ಆಟ, ಕುಂಟಾಟ, ಮುಟ್ಟಾಟ,ಬಳೆ ಆಟ, ಕಡ್ಡಿ ಆಟ.... ಅಬ್ಬಾ! ಒಮ್ಮೆಯಂತೂ ಗುರುಗಳ ಕಣ್ಣಪ್ಪಿಸಿ ಆಲದ ಮರ ಹತ್ತಿ ಜೋಕಾಲಿ ಆಡಲು ಹೋಗಿ ಎಲ್ಲರ ಎದುರೇ ಧೋಪ್ ಎಂದು ಬಿದ್ದದ್ದಾಯಿತು. ಆ ಸಾಧನೆಗಂತೂ ಸಿಕ್ಕ ಬಹುಮಾನವನ್ನು ಮರೆಯುವಂತಿಲ್ಲ. ಮನೆಯಲ್ಲೂ ಕೂಡ ದೊಡ್ಡ ಸನ್ಮಾನವನ್ನೇ ಮಾಡಿದರು. ಮತ್ತೊಮ್ಮೆ ಕೂಡ ಮರ ಹತ್ತುವ ಬಯಕೆ ಬರಲೇ ಇಲ್ಲ.

    ಇನ್ನು ಶಾಲೆಯಲ್ಲಿ ಸಂಭ್ರಮ ಸಡಗರಗಳಿಗೇನು ಕೊರತೆ ಇರಲಿಲ್ಲ. ಆದರಲ್ಲೂ ಆಗಸ್ಟ್ 15 ಜನವರಿ 26 ಬಂದರೆ ಎಲ್ಲಿಲ್ಲದ ಖುಷಿ. ಹೊಸ ಸಮವಸ್ತ್ರವನ್ನು ಅಂದಿನ ದಿನಕ್ಕಾಗಿ ಕಾಯ್ದಿರಿಸಿಕೊಂಡಿರುತ್ತಿದ್ದೆವು. ಹಿಂದಿನ ರಾತ್ರಿಯೇ ನಿದ್ದೆ ಬರದೆ ಹೊರಳಾಡುವುದು, ಅಮ್ಮನಿಗೂ ನಿದ್ರೆ ಮಾಡಲು ಬಿಡುತ್ತಿರಲಿಲ್ಲ. ಎಷ್ಟೊತ್ತಿಗೆ ಬೆಳಗಾಗುವುದು ಎಂದು ಕಾಯುವುದು, ಮನದಲ್ಲೆಲ್ಲ ಖುಷಿಯ ಹೊಳೆ ಹರಿದಾಡುತ್ತಿತ್ತು. ಹೊಸ ಬಟ್ಟೆ ಹೊಸ ಬಳೆ ಸರ ರಿಬ್ಬನ್ ಧರಿಸಿ ಹೋಗುವ ತವಕ, ಪುಟ್ಟ ಬಾವುಟವನ್ನು ಒಂದು ಕೈಯಲ್ಲಿ ಹಿಡಿದು, ಮತ್ತೊಂದು ಕೈಯಲ್ಲಿ ಹೂವಿನ ರಾಶಿ ಹಿಡಿದು ಎಲ್ಲರಿಗಿಂತ ಮುಂಚೆ ಹೊರಟರೆ ಓಹ್! ನಮ್ಮ ದೇಶಕ್ಕೆ ನಾವೇ ಸ್ವಾತಂತ್ರ್ಯ ಕೊಡಿಸಿದಷ್ಟು ಸಂಭ್ರಮ. ಆ ಖುಷಿಗೆ ಪಾರವೇ ಇರಲಿಲ್ಲ. ಬರುವಾಗ ಒಂದಷ್ಟು ಪೆಪ್ಪರ್ಮೆಂಟುಗಳನ್ನು ಕೈಯಲ್ಲಿ ಹಿಡಿದು ತಿನ್ನುತ್ತಾ ಸಂಭ್ರಮಿಸಿದ ಕ್ಷಣಗಳಿಗೆ ಬೆಲೆ ಕಟ್ಟಲಾಗದು.

    ಒಂದಲ್ಲ ಎರಡಲ್ಲ ನಮ್ಮೆಲ್ಲರಿಗೂ ಬಾಲ್ಯದ ದಿನಗಳು ಸಾಕಷ್ಟು ಅನುಭವಗಳನ್ನು ಕೊಟ್ಟಿದೆ. ಸದಾ ಹಸಿರಾಗಿರುವ ನೆನಪುಗಳು ಲೆಕ್ಕವಿಲ್ಲದಷ್ಟು ಇದೆ. ವರ್ಣಿಸಲು ಸಾಧ್ಯವಿಲ್ಲದಷ್ಟು ಸಂತೋಷದ ಕ್ಷಣಗಳನ್ನು ಕಳೆದಿದ್ದೇವೆ. ಕಾಲವು ಒಮ್ಮೆ ಹಿಂದೆ ಸರಿಯುವಂತಾದರೆ ಪುನಹ ಪುಟ್ಟ ಮಕ್ಕಳಾಗಿ ಖುಷಿ ಪಡೋಣ ನಮ್ಮ ಮಕ್ಕಳು ಕೂಡ ಇದಕ್ಕಿಂತ ಸುಂದರವಾದ ಅನುಭವಗಳನ್ನು ಪಡೆಯುವಂತಾಗಲಿ ಎಂಬುದೇ ಈಗಿನ ಆಶಯ.


ಶ್ರೀಮತಿ ರೇಖಾ ಎಸ್ ನಾಯ್ಕ

ಸಹ ಶಿಕ್ಷಕರು, ಸ. ಕಿ. ಪ್ರಾ. ಶಾಲೆ ಹೆಮ್ಮಾಡಿ ಕುಂಬ್ರಿ, ಯಲ್ಲಾಪುರ,ಶಿರಸಿ ಶೈ.ಜಿಲ್ಲೆ ಉ.ಕ.

9535699974

ಕಾಮೆಂಟ್‌ಗಳು

Follow us