ಶಿಕ್ಷಣ ಕ್ಷೇತ್ರ ಎನ್ನುವುದು ನಿಂತ ನೀರಲ್ಲ. ವಿಜ್ಞಾನ ತಂತ್ರಜ್ಞಾನದ ಪ್ರಗತಿಗೆ ಸಮಾಂತರವಾಗಿ ಶಿಕ್ಷಣ ಕ್ಷೇತ್ರವು ತನ್ನ ವಿವಿಧ ಆಯಾಮಗಳಲ್ಲಿ ಪ್ರಗತಿಯ ಕಂಪನ್ನು ಸೂಸುತ್ತಿದೆ.ಈ ಪ್ರಗತಿಯ ಕಂಪು ಫಲಾನುಭವಿಯಾದ ಮಗುವಿಗೆ ಯುಕ್ತ ಪ್ರಮಾಣದಲ್ಲಿ ಲಭ್ಯವಾಗಿ ಅವನಲ್ಲಿ ಸೂಕ್ತ ಬದಲಾವಣೆಗಳನ್ನು ತಂದಾಗ ಮಾತ್ರ ಶಿಕ್ಷಣ ಕ್ಷೇತ್ರದಲ್ಲಿದ್ದವರ ಶ್ರಮಕ್ಕೆ ಸಾರ್ಥಕತೆ ದೊರೆಯುತ್ತದೆ.
ಒಂದು ತರಗತಿ ಅಂದಮೇಲೆ ಅಲ್ಲಿ ವಿವಿಧ ಸಾಮಾಜಿಕ ಸ್ಥರದ,ಬೌದ್ಧಿಕ ಭಿನ್ನತೆಯ ಮಗುವನ್ನು ಗುರುತಿಸಬಹುದು.ಕೆಲವು ಮಕ್ಕಳು ಕಲಿಕೆಯಲ್ಲಿ ಅತೀ ಚುರುಕನ್ನು ತೋರಿಸಿ ಎಲ್ಲಾ ಕಲಿಕಾ ಚಟುವಟಿಕೆಗಳಲ್ಲಿ ಆಸಕ್ತಿಯನ್ನು ತೋರ್ಪಡಿಸಿದರೆ ಇನ್ನೂ ತರಗತಿಯ ಕೆಲ ಮಕ್ಕಳು ಕಲಿಕೆಯಲ್ಲಿ ತೀರಾ ಅನಾಸಕ್ತಿ,ಮೊಂಡುತನ,ಬೇರೆ ಸಹಪಾಠಿಗಳ ಮೇಲೆ ದೌರ್ಜನ್ಯ ಎಸಗುವದು, ಶಾಲಾ ವಸ್ತು ಅಥವಾ ಪರಿಸರವನ್ನು ಹಾಳುಗೆಡಗುವುದು,ಏಕತಾನತೆ, ಏಕಾಂಗಿಯಾಗಿರುವುದು ಮುಂತಾದ ಲಕ್ಷಣಗಳನ್ನು ತೋರ್ಪಡಿಸಬಹುದು.ನಿರ್ದಿಷ್ಟ ತರಗತಿಯಲ್ಲಿ ಇಂತಹ ಲಕ್ಷಣಗಳನ್ನು ಅಥವಾ ಇವುಗಳಲ್ಲಿ ಕೆಲವು ಗೋಚರ ಸ್ವಭಾವವನ್ನು ತೋರ್ಪಡಿಸುವ ವಿದ್ಯಾರ್ಥಿಯು ವೈದ್ಯಕೀಯ ಪಾರಿಭಾಷೆಯಲ್ಲಿ ಆಟಿಸಂ ಲಕ್ಷಣವುಳ್ಳ ಮಗುವಾಗಿರಬಹುದು.
ಆಟಿಸಂ ಮಕ್ಕಳು ಎಂದರೇನು?
ಸಾಮಾನ್ಯ ವಿದ್ಯಾರ್ಥಿಗಳಿಗಿಂತ ಭಿನ್ನವಾದ ಅಸಹಜವಾದ ಲಕ್ಷಣವನ್ನು ತೋರ್ಪಡಿಸುವ ಮಕ್ಕಳನ್ನು ವೈಜ್ಞಾನಿಕವಾಗಿ "ಆಟಿಸಂ" ಮಕ್ಕಳು ಎನ್ನುತ್ತಾರೆ. ಇವರ ಅಸಹಜವಾದ ಕೆಲವು ವರ್ತನೆಗಳು ಇಡೀ ಕಲಿಕಾ ವಾತಾವರಣವನ್ನೇ ಹಾಳುಗೆಡಗಬಹುದು ಹಾಗೂ ಇತರ ವಿದ್ಯಾರ್ಥಿಗಳ ಕಲಿಕೆಗೂ ಮಾರಕವಾಗಬಹುದು.
ಆಟಿಸಂ ಮಕ್ಕಳ ಲಕ್ಷಣಗಳೆನು..?
ಆಟಿಸಂ ಸಮಸ್ಸೆಯನ್ನು ತೋರ್ಪಡಿಸುವ ಮಗುವು ಮೇಲ್ನೋಟಕ್ಕೆ ಸಾಮಾನ್ಯ ಮಗುವಿನಂತೆ ಕಂಡುಬಂದರೂ ಅವನನ್ನು ಶೈಕ್ಷಣಿಕ ಸಾಮಾಜಿಕ ಹಾಗೂ ವಯಕ್ತಿಕ ವಿವಿಧ ಸಂದರ್ಭದಲ್ಲಿ ವೈಜ್ಞಾನಿಕವಾಗಿ ಸೂಕ್ಷ್ಮವಾಗಿ ಅವಲೋಕಿಸುವುದರ ಮೂಲಕ ಆಟಿಸಂ ಸಮಸ್ಯೆಗಳನ್ನು ಗುರುತಿಸಬಹುದು.
ಈ ಸಮಸ್ಸೆಯನ್ನು ಹೊಂದಿರುವ ಮಗುವು ಈ ಕೆಳಗಿನ ಕೆಲ ಸಾಮಾನ್ಯ ವರ್ತನೆಗಳನ್ನು ತೋರ್ಪಡಿಸುತ್ತಾನೆ.
1) ಸಾಮಾಜಿಕವಾಗಿ ಅನುಚಿತವಾಗಿ ವರ್ತಿಸುವುದು,ಅಪರಿಚಿತರ ಜೋತೆ ಅಥವಾ ಕೆಲ ಸಂದರ್ಭಗಳಲ್ಲಿ ಪರಿಚಿರತ ಜೋತೆ ನೇರ ಕಣ್ಣೋಟದಲ್ಲಿ ಮಾತನಾಡದಿರುವುದು,ಪ್ರತಿ ಕೆಲಸದಲ್ಲಿ ತನಗೆ ತಾನೇ ನಿರ್ಭಂದಿಸಿಕೊಳ್ಳುವುದು,ಪದೇ ಪದೇ ತಮ್ಮ ಸಹವರ್ತಿಗಳ ಮೇಲೆ ಹಾಠಾತ್ ದಾಳಿ ಮಾಡುವುದು,ತನಗೆ ತಾನೇ ಹಾನಿ ಮಾಡಿಕೊಳ್ಳುವುದು,ಒಂದು ವಿಷಯವನ್ನು ಹೇಳಿದ್ದನ್ನೆ ಪುನಃ ಪುನಃ ಉಚ್ಚರಿಸುವುದು ಮುಂತಾದ ಅಪಾಯಕಾರಿ, ಸಹಪಾಟಿಗಳಿಗೆ ತದ್ವಿರುದ್ಧವಾದ ಋಣಾತ್ಮಕ ಲಕ್ಷಣಗಳನ್ನು ತೋರ್ಪಡಿಸುತ್ತಾನೆ.
2) ಸಾಮಾನ್ಯ ತನ್ನ ಸಹಪಾಟಿಗಳಿಗಿಂತ ಕಲಿಕೆಯಲ್ಲಿ ತೀರಾ ಹಿಂದುಳಿಯುವುಕೆ , ಅನಾಧರ, ಅನಾಸಕ್ತಿ ತೋರ್ಪಡಿಸುತ್ತಾನೆ.
3) ಪಠ್ಯ ಅಥವಾ ಪಠ್ಯೇತರ ವಿಷಯಗಳ ಕೇಲವೇ ವಿಭಾಗ ಅಥವಾ ಅಂಶಗಳ ಮೇಲೆ ತನ್ನ ಆಸಕ್ತಿ ಕೇಂದ್ರಿಕರಿಸಿ ಉಳಿದ ಅಂಶಗಳ ಮೇಲೆ ತೀರಾ ಅನಾಸಕ್ತಿ ಅಥವಾ ಗಮನ ಕೇಂದ್ರಿಕರಿಸದಿರುವಿಕೆ ಮುಂತಾದ ಲಕ್ಷಣಗಳನ್ನು ತೋರ್ಪಡಿಸುತ್ತಾನೆ.
4) ಭಾವನಾತ್ಮಕವಾಗಿ ಬೆರೆಯುವಿಕೆಯಲ್ಲಿ ತೀರಾ ಸಮಸ್ಸೆಯು ಆಟೀಸಂ ಮಗುವಿನಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ.ವಿಭಿನ್ನ ಸನ್ನಿವೇಶಗಳಿಗನುಗುಣವಾಗಿ ವರ್ತನಾ ಸಮಸ್ಸೆಯು ಮಗುವಿನಲ್ಲಿ ಕಂಡುಬರುತ್ತದೆ.
5) ಇಂತಹ ಸಮಸ್ಸೆಯ ಮಗುವು ಇತರರ ಜೋತೆ ಸುಲಭವಾಗಿ ಬೆರೆಯದೆ ಏಕಾಂಗಿತನ ಅನುಭವಿಸಿ ಖಿನ್ನತೆಗೆ ಒಳಗಾಗುತ್ತಾನೆ.
6) ಬೇರೆಯವರಂತೆ ನಟಿಸುವುದು ಅಥವಾ ಅನುಕರಣೆ ಮಾಡುವಲ್ಲಿ ತೀರಾ ಹಿಂದುಳಿಯುತ್ತಾರೆ.
7) ಆಟಿಸಂ ಮಗುವಿಗೆ ಭಾಷಾ ಸಾಮರ್ಥ್ಯ ತೀರಾ ಆತಂಕಕಾರಿಯಾಗಿದ್ದು, ಇಂತವರು ಪದಸಹಿತ ಸಂಪರ್ಕದಲ್ಲಿ ಸಮಸ್ಯೆಯನ್ನು ಎದುರಿಸುತ್ತಾರೆ
ಆಟಿಸಂ ಸಮಸ್ಸೆಗೆ ಪರಿಹಾರವೇನು..?
ಆಟಿಸಂ ಸಮಸ್ಸೆಯಿರುವ ಮಕ್ಕಳನ್ನು ವಿಭಿನ್ನ ಪರಿಸರದಲ್ಲಿ ಸೂಕ್ಷ್ಮ ಅವಲೋಕನೆಯಿಂದ ಗುರುತಿಸಬಹುದು ಹಾಗೂ ಈ ಕೆಳಗಿನ ಕೆಲವು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದಾಗ ಅಂತಹ ಮಕ್ಕಳನ್ನು ಮುಖ್ಯವಾಹಿನಿಗೆ ತರುವುದು ಸಾದ್ಯ.
1) ಸಮಸ್ಸೆಯ ಆರಂಭದಲ್ಲೆ ಪತ್ತೆ ಹಚ್ಚಿ ಕಾಳಜಿ ,ಪ್ರೀತಿ ,ವಿಶ್ವಾಸ ಕಲಿಕಾ ಪರಿಸರದಲ್ಲಿ ಸಹಾಯ ಹಸ್ತ ಚಾಚಿದಾಗ ಮಗುವಿನಲ್ಲಿ ಸ್ವಲ್ಪ ಮಟ್ಟಿಗೆ ಸಮಸ್ಸೆ ಶಮನ ಮಾಸಾಧ್ಯವಾಗುತ್ತದೆ.
2)ಇದು ಹುಟ್ಟಿನಿಂದಲೇ ಬರುವ ಸಮಸ್ಸೆಯಾಗಿದ್ದು ಆಟಿಸಂ ಸಮಸ್ಸೆಯನ್ನು ಸಾಮಾನ್ಯ ಬಾಲ್ಯದ ತುಂಟಾಟ ಎಂದೇ ತಿಳಿದಿರುತ್ತೇವೆ. ಆದರೇ ಮಗು ದೊಡ್ಡವನಾದಂತೆ ಇದರ ನೈಜ ಸಮಸ್ಸೆ ಸ್ಪಷ್ಟವಾಗುತ್ತದೆ.ಸಮಸ್ಯೆಯನ್ನು ಬೇಗ ಗುರುತಿಸಿದಷ್ಟು ಬೇಗ ಪರಿಹಾರ ಕಂಡು ಮಗುವಿನಲ್ಲಿ ಪ್ರಗತಿ ಕಾಣಲು ಸಾಧ್ಯ
3) ಕೆಲ ಮಕ್ಕಳು ಇದರ ಲಕ್ಷಣಗಳನ್ನು ಜನ್ಮ ತಳದ 12 ರಿಂದ 18 ತಿಂಗಳುಗಳಲ್ಲೆ ತೋರ್ಪಡಿಸುತ್ತಾರೆ.ತಕ್ಷಣ ಸೂಕ್ತ ಚಿಕಿತ್ಸೆ ನೀಡಿದಾಗ ಆಟಿಸಂ ಲಕ್ಷಣಗಳು ಗಣನೀಯವಾಗಿ ಕಡಿಮೆಗೊಳಿಸಿ, ಮಗುವಿನ ಭವಿಷ್ಯ ಉಜ್ವಲಗೊಳಿಸಬಹುದು.
4) ಬಹಳ ಪಾಲಕರು ಆಟಿಸಂ ಸಮಸ್ಸೆಯ ಕುರಿತಾಗಿ ಆರಂಭದಲ್ಲಿ ಅಷ್ಟೊಂದು ಗಂಭೀರತೆಯನ್ನು ತೆಗೆದುಕೊಳ್ಳುವುದಿಲ್ಲ.ವಯಸ್ಸಿಗೆ ಬಂದಾಗ ಇದರ ಗಂಭೀರಅರಿವಾಗುತ್ತದೆ.ಹಾಗಾಗಿ ಸೂಕ್ತ ಸಮಯದಲ್ಲಿ ಯುಕ್ತವಾದ ಪರಿಹಾರ ದೊರಕಿದಲ್ಲಿ ಇದರ ಪರಿಣಾಮವನ್ನು ಗಣನೀಯವಾಗಿ ತಗ್ಗಿಸಬಹುದು.
5) ಕೆಲವು ಮಕ್ಕಳು ಮೂರು ವರ್ಷದ ನಂತರ ಮೇಲ್ನೋಟಕ್ಕೆ ಸಾಮಾನ್ಯರಂತೆ ಕಂಡರೂ ಸಹ ಕೆಲವು ಸಂದರ್ಭಗಳಲ್ಲಿ ತೀರಾ ವ್ಯತಿರಿಕ್ತ ಸ್ವಭಾವ ತೊರ್ಪಡಿಸುತ್ತಾರೆ.ಹಾಗಾಗಿ ಆರಂಭಿಕ ಹಂತದಲ್ಲೇ ಸೂಕ್ತ ಅವಲೋಕನೆ ಹಾಗೂ ಅಗತ್ಯ ವೈಧ್ಯಕೀಯ ಸೌಲಭ್ಯ ಒದಗಿಸುವುದರಿಂದ ಸಮಸ್ಯೆಯ ಪರಿಣಾಮವನ್ನು ತಗ್ಗಿಸಬಹುದು.
ಆಟಿಸಂ ಸಮಸ್ಸೆಯು ವಿಶ್ವದಾದ್ಯಂತ ಕಂಡುಬರುವ ಸಾಮಾನ್ಯ ಮಿದುಳಿಗೆ ಸಂಬಂಧಿಸಿದ ವ್ಯಕ್ತಿಯ ವ್ಯಕ್ತಿತ್ವ ಅಪಸಾಮಾನ್ಯತೆಯ ಲಕ್ಷಣವಾಗಿದೆ.ಸಾಮಾನ್ಯವಾಗಿ ನೂರರಲ್ಲಿ ಒಬ್ಬರಿಗೆ ಕಂಡುಬರುವ ಸಮಸ್ಸೆಯಾಗಿದ್ದು ಸೂಕ್ತ ಅವಲೋಕನೆ ಮಾರ್ಗದರ್ಶನ ಹಾಗೂ ವೈದ್ಯಕೀಯ ಚಿಕಿತ್ಸೆಯ ಮೂಲಕ ಸಂಪೂರ್ಣ ಹೋಗಲಾಡಿಸಬಹುದು. ಆ ಮೂಲಕವಾಗಿ ಮಗುವಿನ ಶೈಕ್ಷಣಿಕ ಅಭಿವೃದ್ಧಿಗೆ ಪೂರಕ ಮಾರ್ಗ ಕಲ್ಪಿಸಬಹುದು.
ಲೇಖಕರು:
ಶ್ರೀ ಗಜಾನನ ಭಟ್ಟ
ಸರಕಾರಿ ಪ್ರೌಢಶಾಲೆ, ಉಮ್ಮಚಗಿ
ತಾ: ಯಲ್ಲಾಪುರ ಶಿರಸಿ ಶೈ.ಜಿಲ್ಲೆ
ಪೋನ್..9449799061


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ