ವಿಷಯ-"ಜಾನಪದದಲ್ಲಿ ಮಾನವೀಯ ಮೌಲ್ಯಗಳು"
🙏🙏 ಎಲ್ಲರಿಗೂ ನಮಸ್ಕಾರ.🙏🙏
ಒಕ್ಕಲಿಗರು ಹಾಡಿದರ ನಾಡೆಲ್ಲ ನಕ್ಕೀತ
ಹಾಡ ಮರೆತರ ನಾಡ ಬಿಕ್ಕೀತ,
ಜತಿಗೂಡಿ ಹಾಡೊಣ ಜನಪದಕ.
ಎಂದು ಗ್ರಾಮೀಣ ಜನರು ರೈತನ ಕುರಿತು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಜನಪದ ಹುಟ್ಟಿದ್ದೆ ಗ್ರಾಮೀಣ ಪ್ರದೇಶದ ಹಳ್ಳಿಗಾಡುಗಳಲ್ಲಿ ಅಂತ ಹೇಳಬಹುದು. ಯಾವ ವಿದ್ವಾಂಸರನ್ನು ಪಂಡಿತರನ್ನು ಮೆಚ್ಚಿಸಲು ಜಾನಪದ ಸೃಷ್ಟಿಯಾಗಲಿಲ್ಲ ಜನರು ತಮ್ಮ ದಿನನಿತ್ಯದ ನೋವು ನಲಿವುಗಳನ್ನು, ಕಷ್ಟ ಸುಖಗಳನ್ನು, ತಮ್ಮ ಹಲವಾರು ಜೀವನದ ಅನುಭವಗಳನ್ನು ವ್ಯಕ್ತಪಡಿಸಲು ಈ ಜಾನಪದ ಸೃಷ್ಟಿಯಾಯಿತು. ಜನಪದ ಅನ್ನುವುದು ಜನರ ಸಂಸ್ಕೃತಿಗೆ ಹಿಡಿದ ಕೈಗನ್ನಡಿಯಾಗಿದೆ ಅಂತ ಹೇಳಬಹುದು. ಜನಪದರು ಜನಾಂಗದ ಜೀವನಾಡಿಯಾಗಿ, ನೀತಿ ಸೂತ್ರವಾಗಿ, ಬಾಳಿನ ಬೆಳಕಾಗಿ ಬದುಕಿನ ವಿವಿಧ ಸಂಸ್ಕೃತಿಗಳನ್ನು ಬಿತ್ತರಿಸುವ ಹೃದಯದ ಮಾಧ್ಯಮವಾಗಿದೆ ಅಂತ ಹೇಳಬಹುದು.
ಅಂದು ನಮ್ಮ ಬದುಕಿನಲ್ಲಿ ಜನಪದ ಇಲ್ಲದಿದ್ದರೆ ಜೀವನಕ್ಕೆ ಯಾವ ಅರ್ಥನು ಇರುತ್ತಿರಲಿಲ್ಲ. ನಮ್ಮ ಪೂರ್ವಜರು ತಮ್ಮ ನಡೆ, ನುಡಿ, ಅಂತ:ಕರಣ, ತತ್ವ, ನಿಷ್ಠೆ, ಶ್ರದ್ಧೆ, ಜೀವನದ ಸಾರ್ಥಕತೆ, ಮಾನವೀಯ ಮೌಲ್ಯಗಳು ಇವು ಯಾವನ್ನು ನಾವು ಕಾಣುತ್ತಿರಲಿಲ್ಲ. ಜನರಿಂದ ಜನರಿಗೆ, ನಾಲಿಗೆಯಿಂದ ನಾಲಿಗೆಗೆ, ಹೃದಯದಿಂದ ಹೃದಯಕ್ಕೆ ಜಾನಪದ ರಸ ವಾಕ್ಯಗಳು ತಟ್ಟಿ ಹೊಸ ಸಾರ್ಥಕ ಬದುಕಿಗೆ ನಿದರ್ಶನವಾಗಿ ಜಾನಪದ ಗೀತೆಗಳು ಬಾಳ್ಯಾವು ಅಂತ ಹೇಳಬಹುದು. ನಮ್ಮ ಪೂರ್ವಜರಿಗೆ ಬದುಕಿನ ಬಗ್ಗೆ ಎಷ್ಟೊಂದು ಆಸ್ತಿ ಇತ್ತೋ, ಅಷ್ಟೇ ಮಾನವೀಯ ಮೌಲ್ಯಗಳ ಬಗ್ಗೆ ಕಾಳಜಿ ಇತ್ತು. ಬದುಕು ಕೇವಲ ನಿಂತ ನೀರಲ್ಲ ಪ್ರತಿನಿತ್ಯ ಸಂಸ್ಕರಿಸುತ್ತಾ, ಪ್ರತಿನಿತ್ಯ ಬಾಳನ್ನು ಸಂಸ್ಕರಿಸಬೇಕು ಸುಖ ದುಃಖ ಗಳನ್ನು ಸಮನಾಗಿ ಸ್ವೀಕರಿಸಬೇಕು. ಬದುಕಿನಲ್ಲಿ ಬರುವ ಬಾಳು ಗಂಭೀರವಾಗಿ ಕಂಡರೂ ಸರ್ವಕಾಲಕ್ಕೂ ಅದನ್ನು ಖುಷಿಯಿಂದ ಜೀವಿಸಬೇಕೆನ್ನುವ ಅನೇಕ ಉದಾತ ವಿಚಾರಗಳು ನಮ್ಮ ಪೂರ್ವಜರದ್ದಾಗಿತ್ತು.
ಅಂತಲೇ ನಮ್ಮ ನಡುವೆ ಕಥೆಗಳು, ಗಾದೆಗಳು, ಕೋಲಾಟಗಳು, ಸೋಬಾನ ಗೀತೆಗಳು, ಗೀಗಿ ಪದ, ಚೌಡಕಿ ಪದ, ಗೊಂದಲಿಗರ ಪದ, ಭಜನೆ, ಕಂಸಾಳೆ, ತೊಗಲುಗೊಂಬೆ ಆಟ, ಬುಡುಬುಡಿಕೆ, ಮಾರಮ್ಮನ ಕುಣಿತ, ಯಕ್ಷಗಾನ, ಗಾರುಡಿ ಕುಣಿತ, ಪೂಜಾ ಕುಣಿತ, ಹಂತಿ ಪದ, ಹೀಗೆ ಒಂದೇ ಎರಡೇ ನಮ್ಮ ಜಾನಪದ ಕಲೆಗಳಿಗೆ ಲೆಕ್ಕ ಇಲ್ಲ. ಇದು ಸಮುದ್ರದ ಆಳ- ವಿಸ್ತಾರವಿದ್ದಂತೆ ಹೇಳುತ್ತಾ ಹೋದರೆ ಮುಗಿಯುವುದಿಲ್ಲ. ನಮ್ಮ ಜನಪದರು ಅಥವಾ ಗ್ರಾಮೀಣರ ಬದುಕಿನಲ್ಲಿ ಮಾನವೀಯ ಮೌಲ್ಯಗಳ ತುಡಿತವಿತ್ತು. ಜೀವನಾದರ್ಶದ ಹಂಬಲವಿತ್ತು. ಇದಕ್ಕೆ ಬೇಕಾದಷ್ಟು ನಿದರ್ಶನಗಳನ್ನು ನಾವು ಕೊಡಬಹುದು. ಮಗಳನ್ನು ಗಂಡನ ಮನೆಗೆ ಕಳಿಸುವಾಗಿನ ತಂದೆ ತಾಯಿ ಪಡುವ ವ್ಯಥೆ, ತಾಯಿ ಇಲ್ಲದ ತವರಿಗೆ ಮಗಳು ಹೋಗುವಾಗಿನ ದುಃಖ, ಅಣ್ಣ ತಂಗಿಯ ಪ್ರೀತಿ, ಗಂಡ ಹೆಂಡತಿಯ ನಡುವಿನ ಸರಸ- ವಿರಸಗಳು, ಮಕ್ಕಳಿಲ್ಲದ ತಾಯಿಯ ಕೊರಗು ಇತ್ಯಾದಿ ನೂರಾರು ದೃಶ್ಯಗಳನ್ನು ನಾವು ಜಾನಪದದಲ್ಲಿ ನೋಡಬಹುದು.
ಶಕುಂತಲೆಯನ್ನು ಗಂಡನ ಮನೆಗೆ ಕಳಿಸುವಾಗಿನ ಕಣ್ವರ ಅಳಲಿಗಿಂತ, ಜಾನಪದ ಗರತಿ ತನ್ನ ಮಗಳನ್ನು ಅತ್ತೆಯ ಮನೆಗೆ ಕಳಿಸುವಾಗಿನ ಅಳಲು ಖಂಡಿತಾ ಕಮ್ಮಿಯದ್ದಲ್ಲಾ. ಇದನ್ನು ಹಾಡಿನ ಮೂಲಕ ಹೇಳಬೇಕೆಂದರೆ,
ಅತ್ತೆಯ ಮನೆಯಾಗ ಮುತ್ತಾಗಿ ಇರಬೇಕು,
ಹೊತ್ತಾಗಿ ನೀಡಿದರು ಉಣಬೇಕು,
ನನ್ನ ಮಗಳ ತವರಿಗೆ ಹೆಸರು ತರಬೇಕು.
ತಾಯಿಯ ನೀತಿಯ ಮಾತು ಗಮನಾರ್ಹ. ಕೊನೆಯಲ್ಲಿ ತಾಯಿ ಒಂದು ಮಾತು ಹೇಳುತ್ತಾಳೆ ಮಗಳಿಗೆ:
ತುಂಬಿದ ಮನೆಯ ಒಡಿಬೇಡ ಮಗಳೇ,
ಅತ್ತೆ ಮಾವರ ಸೇವೆ ನಿತ್ಯನೀ ಮಾಡು,
ಗಂಡನ ಪಾದ ಪೂಜೆ ಮಾಡು,
ಭಾವ ಮೈದುನರಿಗೆ ಬಾಗಿ ನಡೆ
ಎನ್ನುವಂತ ಬುದ್ಧಿಯ ಮಾತುಗಳು ನಿಜವಾಗಿಯೂ ಸ್ತ್ರೀ ಧರ್ಮದ ಪ್ರತೀಕವಾಗಿದೆ. ಇಂತಹ ನೀತಿ ಮಾತುಗಳನ್ನು ಬುದ್ಧಿ ಮಾತುಗಳನ್ನು ಹಾಡಿನ ಮೂಲಕ ವ್ಯಕ್ತಪಡಿಸುವ ತಾಕತ್ತು ನಮ್ಮ ಜನಪದಕ್ಕಿದೆ ಅಂತ ಹೇಳಬಹುದು. ಇಂತಹ ಜನಪದವನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮ ಕರ್ತವ್ಯವಾಗಿದೆ.
ಧನ್ಯವಾದಗಳು 🙏🙏
ಲೇಖಕರು:
ಮುದುಕಾಂಬಿ ಅಲ್ಲಾಸಾಬ ಬಾಗೇವಾಡಿ.
BIERT-BRC, ಯಲ್ಲಾಪುರ
ಶಿರಸಿ ಶೈಕ್ಷಣಿಕ ಜಿಲ್ಲೆ ಉತ್ತರ ಕನ್ನಡ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ